ಟೈನೈಯಿಡೀ
ಬಟ್ಟೆ, ರತ್ನಗಂಬಳಿ, ಹೊದಿಕೆ, ಚರ್ಮ, ಪುಕ್ಕ ಮುಂತಾದವುಗಳನ್ನು ತಗುಲಿ ಹಾನಿ ಮಾಡುವ ಪತಂಗಗಳ ಕುಟುಂಬ. ಲೆಪಿಡಾಪ್ಟರ ಗಣಕ್ಕೆ ಸೇರಿದೆ. ಈ ಕುಟುಂಬದ ಪತಂಗಗಳು ಬಲು ಸಣ್ಣ ಗಾತ್ರದವು. ದೇಹದ ಬಣ್ಣ ಮಾಸಲು ಕಂದು, ಬೂದು ಇಲ್ಲವೇ ಹಳದಿ ಕಂದು. ತಲೆಯ ಮೇಲೆ ಒರಟಾದ ಕೂದಲುಗಳು ಹಾಗೂ ಹುರುಪೆಗಳಿವೆ. ಕಣ್ಣುಗಳು ಚಿಕ್ಕವು. ಚಿಕ್ಕ ಸೊಂಡಿಲು ಇದೆ. ರೆಕ್ಕೆಗಳು ಕಿರಿಯಗಲವು. ನರವಿನ್ಯಾಸ ಬಿಡಿಬಿಡಿಯಾಗಿದೆ. ಹಿಂಗಾಲುಗಳ ಮೇಲೆ ಮುಳ್ಳುಗಳಂಥ ಕೂದಲುಗಳುಂಟು. ಡಿಂಬಗಳು ರೇಷ್ಮೆಯಿಂದ ರಚಿತವಾದ ಗೂಡನ್ನು ನಿರ್ಮಿಸಿಕೊಂಡು ಕೋಶಾವಸ್ಥೆಯಲ್ಲಿ ಕಾಲಕಳೆಯುತ್ತವೆ. ಡಿಂಬಗಳು ಕೊಳೆತಿನಿಗಳು. ಒಣಗಿದ ಪ್ರಾಣಿ ಮತ್ತು ಸಸ್ಯಜನ್ಯ ಆಹಾರಗಳನ್ನೂ ಬೂಷ್ಟನ್ನೂ ತಿಂದು ಬದುಕುತ್ತವೆ. ಉದಾಹರಣೆಗಳು : ಟೆನಿೈಯೋಲ ಬಿಸೆಲಿಯೆಲ, ಟೈನಿಯ ಪೆಲಿಯೊನೆಲ, ಟ್ರೈಕೊಫ್ಯಾಗ ಟಾಪೆಟ್ಜೆಲ.
(ಟಿ.ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ